ಮುಟ್ಟಿದರೆ ಮುನಿ	
ಫ್ಯಾಬೇಸೀ (ಲೆಗ್ಯುಮಿನೋಸೀ) ಕುಟುಂಬದ ಮಿಮೋಸ್ಟಾಯ್ಡೀ ಉಪಕುಟುಂಬಕ್ಕೆ ಸೇರಿದ ಒಂದು ಕಳೆಸಸ್ಯ (ಸೆನ್ಸಿಟಿವ್ ಪ್ಲಾಂಟ್, ಟಚ್ ಮಿ ನಾಟ್). ನಾಚಿಕೆಗಿಡ, ಮುಡುಗುದಾವರೆ, ಮುಟ್ಟಲ ಮುರುಕ, ಲಜ್ಜಾವತಿ, ಗಂಡಕಾಲೆ, ನಮಸ್ಕಾರಿ ಪರ್ಯಾಯನಾಮಗಳು. ಇದರ ಎಲೆಗಳನ್ನು ಮುಟ್ಟಿದರೆ ನಮಸ್ಕಾರ ಮಾಡುವಂತೆ ಮುದುಡಿಕೊಳ್ಳುವುದರಿಂದ ಈ ಗಿಡಕ್ಕೆ ಮೇಲೆ ಹೇಳಿದ ಹೆಸರುಗಳು ಆರೋಪಿತವಾಗಿವೆ. ಮಿಮೋಸ ಪ್ಯೂಡಿಕ ಇದರ ಸಸ್ಯ ವೈಜ್ಞಾನಿಕ ಹೆಸರು.
ಭಾರತದ ವಿದೇಶೀ (ಎಕ್ಸಾಟಿಕ್) ಸಸ್ಯಗಳ ಪೈಕಿ ಒಂದಾಗಿರುವ ಈ ಸಸ್ಯದ ತವರು ದಕ್ಷಿಣ ಅಮೆರಿಕ, ಪ್ರಮುಖವಾಗಿ ಬ್ರಜûಲ್ ಎಂದು ಬಗೆಯಲಾಗಿದೆ. ಭಾರತದ ಉಷ್ಣಪ್ರಾಂತ್ಯಗಳೆಲ್ಲೆಲ್ಲ ವ್ಯಾಪಕವಾಗಿ ಕಾಣಸಿಕ್ಕುವ ಇದು ಈ ಪ್ರದೇಶಗಳ ಕಳೆಸಸ್ಯಗಳ ಪೈಕಿ ಒಂದು. 50-90 ಸೆಂಮೀ ಎತ್ತರಕ್ಕೆ ಕುಳ್ಳುಪೊದೆಯಾಗಿ ಬೆಳೆಯುತ್ತದೆ. ಕಾಂಡ ಹಾಗೂ ಎಲೆಗಳ ರೇಕೀಸಿನ ಮೇಲೆಲ್ಲ ಸಣ್ಣ ಮುಳ್ಳುಗಳುಂಟು. ಎಲೆಗಳು ದ್ವಿಪಿಚ್ಛಕ ಮಾದರಿಯವು: ಪ್ರತಿಯೊಂದು ಎಲೆಯಲ್ಲಿ 2-4 ವರ್ಣಕಗಳೂ ಇವುಗಳಲ್ಲಿ ತಲಾ 10-20 ಕಿರು ಎಲೆಗಳೂ ಇವೆ. ಎಲೆಗಳ ಬೆಳಕು. ಕಂಪನ ಹಾಗೂ ಸ್ಪರ್ಶ ಮುಂತಾದ ಚೋದಕಗಳಿಗೆ ಸಂವೇದನವನ್ನು (ರೆಸ್ಟಾನ್ಸ್) ವ್ಯಕ್ತ ಪಡಿಸುತ್ತವೆ. ಚೋದಕಗಳಿಗೆ ಒಡ್ಡಿದಾಗ ಮೊದಲು ಕಿರುಎಲೆಗಳು ಮೇಲ್ಮುಖವಾಗಿ ಮುದುಡಿಕೊಂಡು ಒಂದನ್ನೊಂದು ಕೂಡಿಕೊಳ್ಳುತ್ತವೆ. ಅನಂತರ ಈ ಮುದುಡು ಚಲನೆ ಕೇಂದ್ರಾಭಿಗಾಮಿಯಾಗಿ ಮುಂದುವರಿದು ಎಲೆಯ ತೊಟ್ಟು ಹಾಗೂ ಕೊಂಬೆಗಳಿಗೆ ತಲಪಿ ಅವು ಕೂಡ ಶೀಘ್ರಗತಿಯಲ್ಲೆ ಕೆಳಮುಖವಾಗಿ ಬಾಗುವಂತಾಗುತ್ತದೆ. ಈ ಎಲ್ಲ ಚಲನೆಯ ತೀವ್ರತೆ ಚೋದಕದ ತೀಕ್ಷ್ಣತೆಯನ್ನು ಅನುಸರಿಸಿ ಶೀಘ್ರ ಇಲ್ಲವೆ ಮಂದಗತಿಯಾದಾಗಿರುತ್ತದೆ. ಮತ್ತೆ ಎಲೆಗಳು ಮುಂಚಿನ ಸ್ಥಿತಿಗೆ ಬರಲು ಸಾಕಷ್ಟು ಕಾಲಾವಕಾಶ ಬೇಕು. ಈ ವಿದ್ಯಮಾನಕ್ಕೆ ಸ್ಪರ್ಶಾನುಕುಂಚನ ಅಥವಾ ಕಂಪಾನಾನುಕುಂಚನ ಎಂದು ಹೆಸರಿದ್ದು ಇದಕ್ಕೆ ಕಾರಣ ಎಲೆಗಳ ತೊಟ್ಟಿನ ಉಬ್ಬಿದ ಬುಡದಲ್ಲಿ (ಪಲ್ವೈನಸ್) ಇರುವ ಕೋಶಗಳ ಆದ್ರ್ರತಾ ಸಂವೇದನಾಶೀಲತೆ.
ಮುಟ್ಟಿದರೆ ಮುನಿಯ ಹೂಗಳು ಬಲು ಚಿಕ್ಕಗಾತ್ರದವೂ ನಸುಗೆಂಪು ಬಣ್ಣದವೂ ಆಗಿದ್ದು ಗುಂಡನೆಯ ಚಂಡಿನಂಥ ಮಂಜರಿಗಳಲ್ಲಿ ಅಡಕಗೊಂಡಿವೆ. ಕಾಯಿಗಳು ಚಪ್ಪಟೆಯಾದ ಪಾಡ್ ಮಾದರಿಯವು. ಇವುಗಳ ಮೇಲೆಲ್ಲ ಕಿರುಮುಳ್ಳುಗಳುಂಟು. ಬೀಜಗಳ ಸಂಖ್ಯೆ 3-5.
ಈ ಗಿಡ ಎಳೆಯದಿರುವಾಗ ದನಕರುಗಳಿಗೆ ಒಳ್ಳೆಯ ಪೌಷ್ಟಿಕಮೇವು. ಗಿಡ ದೊಡ್ಡದಾಗುತ್ತ ಮುಳ್ಳುಗಳು ಬಿರುಸಾಗುವುದರಿಂದ ದನಗಳು ತಿನ್ನುವುದಿಲ್ಲ. ಕುದುರೆಗಳಿಗೆ ಇದು ಒಳ್ಳೆಯದಲ್ಲ. ಹಸುರುಗೊಬ್ಬರವಾಗಿ ಕೂಡ ಇದನ್ನು ಉಪಯೋಗಿಸಲಾಗಿದೆ. ಮುಟ್ಟಿದರೆ ಮುನಿ ಆಯುರ್ವೇದ ವೈದ್ಯಪದ್ಧತಿಯಲ್ಲಿ ಒಳ್ಳೆಯ ಔಷಧಿಸಸ್ಯವೆಂದು ಪ್ರಸಿದ್ಧವಾಗಿದೆ. ಕಥ ಪಿತ್ತವಿಕಾರಗಳನ್ನು ದೂರ ಮಾಡುವುದಲ್ಲದೆ ರಕ್ತಪಿತ್ತ, ಭೇದಿ, ಯೋನಿರೋಗಗಳನ್ನು ನಿವಾರಿಸುತ್ತದೆ. ಮೂತ್ರವಿಸರ್ಜನೆಯಾಗುವಾಗ ಉರಿ ಕಾಣಿಸಿಕೊಂಡರೆ, ರಕ್ತಹೋಗುತ್ತಿದ್ದರೆ, ಮೂತ್ರಾಂಗಗಳಲ್ಲಿ ಹರಳು ಕಟ್ಟಿದ್ದರೆ ಇದರ ಒಣಬೇರಿನ ಕಷಾಯ ಸೇವನೆ ಉಪಯುಕ್ತವೆನ್ನಲಾಗಿದೆ. ಮೂಳೆರೋಗ, ಭಗಂದರ, ಅಂಡವಾಯು, ಬಿಳಿ ಹಾಗೂ ಕೆಂಪುಸೆರಗು ಮುಂತಾದವಕ್ಕೆ ಇದರ ಎಲೆ ಮತ್ತು ಬೇರಿನ ಕಷಾಯ ಪರಿಣಾಮಕಾರಿ ಔಷಧ. ಗ್ರಂಥಿಗಳ ಊತ, ಮೊಳೆರೋಗ, ಮೂತ್ರಪಿಂಡಗಳ ಊತ ಮುಂತಾದ ಹಲವಾರು ಬÉೀನೆಗಳಿಗೆ ಇದರ ಎಲೆ ಮತ್ತು ಬೇರು ಕಷಾಯ ಒಳ್ಳೆಯ ಮದ್ದು ಎನಿಸಿದೆ.										  
 (ಟ.ಎಸ್.ಸಿ.ಎಸ್.)  
									(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ